ಮೀನು, ಮಾಂಸ, ತರಕಾರಿಗಳ ಜೊತೆಗೆ
ಇಲ್ಲಿ ಎಲ್ಲವೂ ಮಾರಾಟಕ್ಕಿದೆ
ಎಲ್ಲವೂ! ಪಂಚಭೂತಗಳೂ ಸೇರಿ
ನಾವು ವ್ಯಪಾರಿಗಳು
ನಮಗೆ ವ್ಯಾಪಾರ, ವ್ಯವಹಾರಗಳೆ ಧರ್ಮ
ಲಾಭವೊಂದೇ ನಿಜವಾದ ಮುಕ್ತಿ!
ಎಲ್ಲವನ್ನೂ ಮಾರುತ್ತೇವೆ
ನಾವು ಮಾರಾಟ ಮಾಡದ ಸರಕಿಲ್ಲ
ಸರಕಿಲ್ಲದೆ ವ್ಯಾಪಾರವಿಲ್ಲ, ಲಾಭ! ಮುಕ್ತಿ?
ವ್ಯಾಪಾರ ವ್ಯವಹಾರಕ್ಕೆ
ಅಂಗಡಿ ಮುಗ್ಗಟ್ಟುಗಳೇ ಬೇಕೆಂದೇನಿಲ್ಲ
ಸ್ಕೂಲು, ಆಸ್ಪತ್ರೆಗಳಲ್ಲಂತು ಲಾಭ, ನಿರಂತರ!
ಮೌಢ್ಯ-ವಿಜ್ಞಾನ, ಮಾಹಿತಿ-ಮನರಂಜನೆ
ಯಾವುದನ್ನೂ ಮಾರದೆ ಬಿಟ್ಟಿಲ್ಲ
ಹೆಣ್ಣು! ಎಲ್ಲ ವ್ಯಾಪಾರಕ್ಕೂ ಬೇಕು.
ಮಾದ್ಯಮ, ರಾಜಕೀಯವೂ
ನಮ್ಮ ಮಾರುಕಟ್ಟೆಗಳೆ
ಗಿರಾಕಿಗಳಿಗೆ ಬಲೆ ಬೀಸುವುದು ಇಲ್ಲಿಂದಲೆ
ಚುನಾವಣಾ ಮಾರುಕಟ್ಟೆಯಲ್ಲಿ
ಪ್ರಜಾಪ್ರಭುತ್ವವೇ ಸರಕು
ಹೂಡಿದರೆ ಬಂಡವಾಳ ಕೈಗೊಂಬೆ ಸರ್ಕಾರ
ಭಯೋತ್ಪಾದನೆ, ಯುದ್ಧಗಳಾದರೆ
ನಮಗೆ ಭರ್ಜರಿ ವ್ಯಾಪಾರ
ಶಾಂತಿಗಾಗಿ ಬಾಂಬು, ಬಂದೂಕು
ಹೊಲ-ಗದ್ದೆ, ಕಾರ್ಖಾನೆ-ಕಛೇರಿಗಳಲ್ಲಿ
ಕೆಲಸಗಾರರಿಗೆ ಸಿಕ್ಕರೆ ಸಂಪೂರ್ಣ ಫಲ
ನಮ್ಮ ಲಾಭಕ್ಕೇ ಸಂಚಕಾರ
ಅದಕ್ಕೆ, ನಾವೂ ಕೊಳ್ಳುತ್ತೇವೆ!
ಕಡಿಮೆಗೆ, ಅತೀ ಕಡಿಮೆಗೆ
ಕೆಲಸಗಾರರ ಕೆಲಸವನ್ನ
ಲಾಭವಿಲ್ಲದೆ ನಾವಿಲ್ಲ
ನಮ್ಮ ತಳಹದಿಯೇ ಲಾಭ
ಲಾಭವೊಂದೇ ನಮ್ಮ ನಿಯಮ.
No comments:
Post a Comment