★ಲಾಭ ಮತ್ತು ನೈತಿಕತೆ.
'ಲಾಭ' ಎನ್ನುವುದೇ ಅತ್ಯಂತ ಅನೈತಿಕವಾದುದು. ಒಬ್ಬರ ನಷ್ಟವಷ್ಟೇ ಮತ್ತೊಬ್ಬರ ಲಾಭವಾಗಬಲ್ಲದು. ಕೂಲಿ-ಕಾರ್ಮಿಕರ ಅತಿ ಹೆಚ್ಚು ಶ್ರಮಕ್ಕೆ ಕಡಿಮೆ ಕೂಲಿ ಎಂಬ ನಷ್ಟ, ರೈತರ ಶ್ರಮ ದುಡಿಮೆಯ ಫಸಲಿಗೆ ಕಡಿಮೆ ಬೆಲೆ ಎಂಬ ನಷ್ಟ, ಬಳಕೆದಾರರು ಕೊಳ್ಳುವ ಸರಕಿಗೆ ದುಬಾರಿ ಬೆಲೆ ತೆರಬೇಕಾದ ನಷ್ಟ,... ಇತ್ಯಾದಿ. ಇಂತಹ ಹಲವು ನಷ್ಟಗಳನ್ನು ಉದ್ದಿಮೆದಾರರು, ಮಧ್ಯವರ್ತಿಗಳು, ಗುತ್ತಿಗೆದಾರು, ವ್ಯಾಪಾರಿಗಳು ತಮಗಾದ ಲಾಭ ಎಂದು ಬಿಂಬಿಸಿಕೊಳ್ಳುತ್ತಾರೆ.
ಆದರೆ, ಅವರ ಲಾಭದ ಯಶೋಗಾಥೆಯ ಹಿಂದೆ ಜನರು ತಮ್ಮ ನ್ಯಾಯ ಸಮ್ಮತ ಪಾಲು ಕಳೆದುಕೊಂಡು ನಷ್ಟದಿಂದ ನರಳುತ್ತಿರುತ್ತಾರೆ. ಹಲವರ ನಷ್ಟಕ್ಕೆ ಕಾರಣರಾದ ಕೆಲವರು, ತಾವು ಮಾಡಿದ ಲೂಟಿಯನ್ನೇ ಅವರು ಹೂಡಿದ ಬಂಡವಾಳಕ್ಕೆ ಸಿಕ್ಕ ಲಾಭ ಎನ್ನಿಸಿ, ಯಶಸ್ವಿ ಉದ್ಯಮಿ, ವ್ಯಾಪಾರಿಗಳಾಗಿ ಸಮಾಜ ಪ್ರಭಾವಿ ಗಣ್ಯವ್ಯಕ್ತಿಗಳಾಗಿ, ತಾವು ಮಾಡಿದ ಲೂಟಿಗೆ ಕಾನೂನಿನ ಮುದ್ರೆ ಒತ್ತಿಸಿಕೊಳ್ಳುತ್ತಾರೆ.
ತಮ್ಮ ಲಾಭದ ಏಕೈಕ ಉದ್ದೇಶಕ್ಕಾಗಿ, ಜನ ಪ್ರತಿನಿಧಿಗಳು, ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸಿ ಸರಕಾರದ ಕಾನೂನುಗಳನ್ನೇ ತಮ್ಮ ಪರವಾಗಿ ಬದಲಾಯಿಸಿಕೊಳ್ಳುತ್ತಾರೆ. ಆದರೆ, ಅವರು ಮಾತ್ರ ಭ್ರಷ್ಟಾಚಾರ ವಿರೋಧಿ ಕಾಯ್ದೆಯಿಂದ ಹೊರಗಿರುತ್ತಾರೆ.
ಚಾರಿಟಿಯ ಹೆಸರಿನಲ್ಲಿ ತಮ್ಮ ಲೂಟಿಯ ಒಂದಂಶವನ್ನಷ್ಟೇ ದಾನ-ಧರ್ಮ ಮಾಡಿ ಸಮಾಜ ಸೇವಕರೂ ಧರ್ಮ ರತ್ನಾಕರರೂ ಆಗುತ್ತಾರೆ. ಸದಾ ಕೊರತೆಯಲ್ಲಿಯೇ ಬದುಕುವ ಅನಿವಾರ್ಯ ಒತ್ತಡಕ್ಕೊಳಗಾದ ವಿಶಾಲ ಜನಸಮುದಾಯ ಮಾತ್ರ ನಿರಂತರ ಲೂಟಿಗೊಳಗಾಗುತ್ತಲೇ ಇರುತ್ತದೆ.
ಹಾಗಾಗಿ ನನ್ನ ಅಭಿಪ್ರಾಯದಲ್ಲಿ 'ಲಾಭ' ಎನ್ನುವುದು ಅತ್ಯಂತ ಅನಾಗರೀಕ, ಅನೈಸರ್ಗಿಕ, ಅನೈತಿಕವಾದುದು. ಆದರೆ, ಯಾವುದೇ ನೈತಿಕ ತಳಹದಿಯಿಲ್ಲದ 'ಲಾಭ'ದ ಪರವಾಗಿ ಧರ್ಮ ಮತ್ತು ಕಾನೂನುಗಳು ವಕಾಲತ್ತು ವಹಿಸುತ್ತಿರುವುದು ಸಧ್ಯದ ನಿಜವಾದ ಸಾಮಾಜಿಕ ದುರಂತವಾಗಿದೆ.
No comments:
Post a Comment