ದಲಿತರನ್ನು ಮತ್ತಷ್ಟು ದರಿದ್ರರನ್ನಾಗಿಸುವ ದಿನಗಳು ಬರುತ್ತಿವೆಯೇ?
ಸಾವಿರಾರು ವರ್ಷಗಳಿಂದ ದಲಿತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ದುಡಿಮೆಯ ಅವಕಾಶ ಮತ್ತು ಸಂಪತ್ತಿನ ಪಾಲನ್ನು ನಿರಾಕರಿಸಿ ದಬ್ಬಾಳಿಕೆಯಿಂದ ಇಲ್ಲವಾಗಿಸಲಾಗಿತ್ತು. ದಲಿತರಿಂದ ಕಿತ್ತುಕೊಳ್ಳಲಾಗಿದ್ದರಲ್ಲಿ, ಪೂರ್ಣವಲ್ಲದಿದ್ದರೂ ಸ್ವಲ್ಪವಾದರೂ ಸಲ್ಲಿಸಲು ದಲಿತರಿಗೆ ಶಿಕ್ಷಣ & ಉದ್ಯೋಗದಲ್ಲಿನ ಕೆಲವೇ ಅವಕಾಶಗಳನ್ನು ಮೀಸಲಿರಿಸಿ ಕಾನೂನು ಮಾಡಲಾಯಿತು.
ಆರಂಭದಿಂದಲೂ ಈ ಕನಿಷ್ಠ ಮೀಸಲಾತಿಯನ್ನೂ ಸಹಿಸದ ಮೇಲ್ವರ್ಗದ ಮನಸ್ಸುಗಳು 'ಕಾರ್ಯದಕ್ಷತೆ'ಯ(ಅದು ಅವರಿಗೆ ಮಾತ್ರ ಇರುವುದು!) ಹೆಸರಿನಲ್ಲಿ ಅದನ್ನೂ ಇಲ್ಲವಾಗಿಸಲು ಪ್ರಯತ್ನಿಸುತ್ತಲೇ ಇದ್ದವು.
ನವ ಉದಾರೀಕೃತ ಆರ್ಥಿಕ ನೀತಿಗಳ ಜಾರಿಯಿಂದಾಗಿ ಖಾಸಗಿ ವಲಯ ವಿಸ್ತಾರಗೊಂಡು ಸಾರ್ವಜನಿಕ ವಲಯ ಕ್ಷೀಣಿಸುತ್ತಾ ಬಂದಿದೆ. ಹಾಗೆಯೇ ದಲಿತರಿಗೆ ಶಿಕ್ಷಣ & ಉದ್ಯೋಗದಲ್ಲಿನ ಅವಕಾಶಗಳೂ ಕಡಿಮೆಯಾಗಿವೆ.
ಖಾಸಗಿ ವಲಯದಲ್ಲಿನ ಶಿಕ್ಷಣ & ಉದ್ಯೋಗ ಪಡೆಯುವ 'ಅರ್ಹತೆ' & 'ಬುದ್ದಿವಂತಿಕೆ'(ಮೇಲ್ವರ್ಗದವರ ಪ್ರಕಾರ) ಇಲ್ಲದ ಇಲ್ಲದ ದಲಿತರು ಸರಿಯಾದ ಶಿಕ್ಷಣ, ಭೂಮಿ, ಉದ್ಯೋಗವಿಲ್ಲದೆ, ಅಸಂಘಟಿತ ವಲಯದಲ್ಲಿ ಕೂಲಿಗಳಾಗಿದ್ದಾರೆ. ಸಾಂದರ್ಭಿಕ, ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರೆಂಬ 'ನವ ಜೀತದಾಳು'ಗಳನ್ನಾಗಿ ಮಾಡಲಾಗಿದೆ.
ಪರಿಸ್ಥಿತಿ ಹೀಗಿರುವಾಗ, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಮಾಡುವ ಬದಲು, 'ಮೋದಿ ಸರ್ಕಾರ' ಅಸ್ತಿತ್ವಕ್ಕೆ ಬಂದಮೇಲೆ ದಲಿತರಿಗಿರುವ ಕನಿಷ್ಠ ಅವಕಾಶಗಳನ್ನು ಸಹ ಇಲ್ಲವಾಗಿಸಲು 'ಮೂರು ತಲೆಮಾರಿಗೆ ಮಾತ್ರ ಮೀಸಲಾತಿ' ಎಂದು ಬಿಜೆಪಿಯೊಳಗಿನ ದಲಿತರಿಂದಲೇ ಹೇಳಿಸಲಾಗುತ್ತಿದೆ.
ಹಾಗಾದರೆ, ಉಳ್ಳವರ ಖಾಸಗಿ ಸಂಪತ್ತು & ಆಸ್ತಿಯನ್ನೂ ಸಹ, ಮೂರು ತಲೆಮಾರಿಗೆ ಮಾತ್ರ ಮೀಸಲಿರಿಸಿ, ನಂತರ ಸಾರ್ವಜನಿಕಗೊಳಿಸಿದರೆ ಇಲ್ಲದವರಿಗೆ ಸ್ವಲ್ಪವಾದರೂ ನ್ಯಾಯ ಸಿಕ್ಕೀತು.
No comments:
Post a Comment