Wednesday, October 15, 2014

ಲಾಭ ಮತ್ತು ನೈತಿಕತೆ

★ಲಾಭ ಮತ್ತು ನೈತಿಕತೆ.

  'ಲಾಭ' ಎನ್ನುವುದೇ ಅತ್ಯಂತ ಅನೈತಿಕವಾದುದು. ಒಬ್ಬರ ನಷ್ಟವಷ್ಟೇ ಮತ್ತೊಬ್ಬರ ಲಾಭವಾಗಬಲ್ಲದು. ಕೂಲಿ-ಕಾರ್ಮಿಕರ ಅತಿ ಹೆಚ್ಚು ಶ್ರಮಕ್ಕೆ ಕಡಿಮೆ ಕೂಲಿ ಎಂಬ ನಷ್ಟ, ರೈತರ ಶ್ರಮ ದುಡಿಮೆಯ ಫಸಲಿಗೆ ಕಡಿಮೆ ಬೆಲೆ ಎಂಬ ನಷ್ಟ, ಬಳಕೆದಾರರು ಕೊಳ್ಳುವ ಸರಕಿಗೆ ದುಬಾರಿ ಬೆಲೆ ತೆರಬೇಕಾದ ನಷ್ಟ,... ಇತ್ಯಾದಿ. ಇಂತಹ ಹಲವು ನಷ್ಟಗಳನ್ನು ಉದ್ದಿಮೆದಾರರು, ಮಧ್ಯವರ್ತಿಗಳು, ಗುತ್ತಿಗೆದಾರು, ವ್ಯಾಪಾರಿಗಳು ತಮಗಾದ ಲಾಭ ಎಂದು ಬಿಂಬಿಸಿಕೊಳ್ಳುತ್ತಾರೆ.

  ಆದರೆ, ಅವರ ಲಾಭದ ಯಶೋಗಾಥೆಯ ಹಿಂದೆ ಜನರು ತಮ್ಮ ನ್ಯಾಯ ಸಮ್ಮತ ಪಾಲು ಕಳೆದುಕೊಂಡು ನಷ್ಟದಿಂದ ನರಳುತ್ತಿರುತ್ತಾರೆ. ಹಲವರ ನಷ್ಟಕ್ಕೆ ಕಾರಣರಾದ ಕೆಲವರು, ತಾವು ಮಾಡಿದ ಲೂಟಿಯನ್ನೇ ಅವರು ಹೂಡಿದ ಬಂಡವಾಳಕ್ಕೆ ಸಿಕ್ಕ ಲಾಭ ಎನ್ನಿಸಿ, ಯಶಸ್ವಿ ಉದ್ಯಮಿ, ವ್ಯಾಪಾರಿಗಳಾಗಿ ಸಮಾಜ ಪ್ರಭಾವಿ ಗಣ್ಯವ್ಯಕ್ತಿಗಳಾಗಿ, ತಾವು ಮಾಡಿದ ಲೂಟಿಗೆ ಕಾನೂನಿನ ಮುದ್ರೆ ಒತ್ತಿಸಿಕೊಳ್ಳುತ್ತಾರೆ.

  ತಮ್ಮ ಲಾಭದ ಏಕೈಕ ಉದ್ದೇಶಕ್ಕಾಗಿ, ಜನ ಪ್ರತಿನಿಧಿಗಳು, ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸಿ ಸರಕಾರದ ಕಾನೂನುಗಳನ್ನೇ ತಮ್ಮ ಪರವಾಗಿ ಬದಲಾಯಿಸಿಕೊಳ್ಳುತ್ತಾರೆ. ಆದರೆ, ಅವರು ಮಾತ್ರ ಭ್ರಷ್ಟಾಚಾರ ವಿರೋಧಿ ಕಾಯ್ದೆಯಿಂದ ಹೊರಗಿರುತ್ತಾರೆ.

  ಚಾರಿಟಿಯ ಹೆಸರಿನಲ್ಲಿ ತಮ್ಮ ಲೂಟಿಯ ಒಂದಂಶವನ್ನಷ್ಟೇ ದಾನ-ಧರ್ಮ ಮಾಡಿ ಸಮಾಜ ಸೇವಕರೂ ಧರ್ಮ ರತ್ನಾಕರರೂ ಆಗುತ್ತಾರೆ. ಸದಾ ಕೊರತೆಯಲ್ಲಿಯೇ ಬದುಕುವ ಅನಿವಾರ್ಯ ಒತ್ತಡಕ್ಕೊಳಗಾದ ವಿಶಾಲ ಜನಸಮುದಾಯ ಮಾತ್ರ ನಿರಂತರ ಲೂಟಿಗೊಳಗಾಗುತ್ತಲೇ ಇರುತ್ತದೆ.

  ಹಾಗಾಗಿ ನನ್ನ ಅಭಿಪ್ರಾಯದಲ್ಲಿ 'ಲಾಭ' ಎನ್ನುವುದು ಅತ್ಯಂತ ಅನಾಗರೀಕ, ಅನೈಸರ್ಗಿಕ, ಅನೈತಿಕವಾದುದು. ಆದರೆ, ಯಾವುದೇ ನೈತಿಕ ತಳಹದಿಯಿಲ್ಲದ 'ಲಾಭ'ದ ಪರವಾಗಿ ಧರ್ಮ ಮತ್ತು ಕಾನೂನುಗಳು ವಕಾಲತ್ತು ವಹಿಸುತ್ತಿರುವುದು ಸಧ್ಯದ ನಿಜವಾದ ಸಾಮಾಜಿಕ ದುರಂತವಾಗಿದೆ.

Monday, October 13, 2014

★ನೆಮ್ಮದಿ ಬದುಕಿನ ಒಳ್ಳೆಯ ದಿನಗಳು★

★ನೆಮ್ಮದಿ ಬದುಕಿನ ಒಳ್ಳೆಯ ದಿನಗಳು★

ಎಲ್ಲರೂ ದುಡಿಯುವುದು ಸುಖ, ಶಾಂತಿ ಮತ್ತು ನೆಮ್ಮದಿ ಬದುಕಿನ ಒಳ್ಳೆಯ ದಿನಗಳಿಗಾಗಿ.

ನೆಮ್ಮದಿ ಸಿಗುವುದು ಶಾಂತಿ ನೆಲೆಸಿದಾಗ, ಶಾಂತಿ ನೆಲೆಸುವುದು ಎಲ್ಲರೂ ಸುಖದಲ್ಲಿದ್ದಾಗ, ಸುಖ ಸಿಗುವುದು ತೃಪ್ತಿಯಾದಾಗ, ತೃಪ್ತಿಯಾಗುವುದು ಲೌಕಿಕ ಅಗತ್ಯಗಳು ಪೂರೈಸಿದಾಗ.

ಕೊರತೆಗಳಿರದ ಒಂದು ಸಂತೃಪ್ತ ಸಮಾಜದಲ್ಲಿ ಮಾತ್ರ, ನೆಮ್ಮದಿಯ ಬದುಕು ಸಾಧ್ಯ!

ಹಲವರ ನಷ್ಟವನ್ನೇ, ಕೆಲವರು 'ಲಾಭ' ಎಂದು ವಿಜೃಂಭಿಸಿಕೊಳ್ಳುವ ಈ ಲೂಟಿ ಕೋರರ ವ್ಯವಸ್ಥೆ ಇರುವ ವರೆಗೆ ನೆಮ್ಮದಿ ಬದುಕಿನ 'ಒಳ್ಳೆಯ ದಿನಗಳು' ಕಲ್ಪನೆಯಲ್ಲಿ ಮಾತ್ರ ಬರಬಲ್ಲವು!

Sunday, October 12, 2014

ಕಾಲು ಚಾಚುವಷ್ಟು ಹಾಸಿಗೆ ಹಾಕು

★'ಹಾಸಿಗೆ ಇದ್ದಷ್ಟು ಕಾಲು ಚಾಚು'★

  ಇದು ನಮ್ಮ ಹಿರಿಯರು ನಮಗೆ ಆಗಾಗ್ಗೆ ಹೇಳುತ್ತಾ ಬಂದ ಗಾದೆ. ಇರುವಷ್ಟರಲ್ಲಿ ನೆಮ್ಮದಿಯಾಗಿರು ಎಂದು ನಮಗೆ ಜೀವನ ಪಾಠ ಹೇಳಿದ್ದು ಹೀಗೆ.

  ಆದರೆ ಈ ಗಾದೆ ಎಷ್ಟೊಂದು ಜನ ವಿರೋಧಿ ಎನ್ನುವುದು ಇದರಲ್ಲಿ ಅಡಕವಾಗಿರುವ. ಯಜಮಾನಿಕೆ ಸಂಸ್ಕೃತಿಯ ಅಂಶ ಗಮನಿಸಿದರೆ ಗೊತ್ತಾಗುತ್ತೆ. ಬಹಳ ಹಿಂದಿನಿಂದಲೂ ಆಳುವ ಯಜಮಾನರು ದುಡಿಯುವ ಜನರನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.

  ಒಡೆಯರಿಗಾಗಿ ದುಡಿದು ನಿತ್ರಾಣಗೊಂಡರೂ ಅವರಿಗೆ ಸಿಗಬೇಕಾದ ಫಲ ಸಿಗುತ್ತಿರಲಿಲ್ಲ. ಒಡೆಯ ‘ಕೃಪೆಮಾಡಿ' ಕೊಟ್ಟಿದ್ದರಲ್ಲೇ ಕಷ್ಟಪಟ್ಟು ಜೀವನ ಸಾಗಿಸಬೇಕಾದ ಪರಿಸ್ಥಿತಿ. ಆರಾಮವಾಗಿ ಕಾಲು ಚಾಚಿದರೆ ಕಾಲು ನೆಲಕ್ಕೆ ಬೀಳುತ್ತಿತ್ತು. ಸದಾ ಕೊರತೆಯಲ್ಲಿಯೇ ಬದುಕು ನೂಕಬೇಕಾದ ಸ್ಥಿತಿಗೆ ತಕ್ಕಂತೆ ಗಾದೆ ರೂಢಿಗೆ ಬಂದಿತು.

  ಆದರೆ 'ಯಜಮಾನರಿಲ್ಲದ ಪ್ರಜಾಪ್ರಭುತ್ವದ' ಸಂದರ್ಭದಲ್ಲಿಯೂ ಈ ಗಾದೆ ಅನ್ವಯಿಸುತ್ತಿರುವುದೇ ದುರಂತ. ಈಗಲೂ ಹಾಸಿಗೆ ಮೀರಿ ಕಾಲು ಚಾಚುವುದು ಅಪರಾಧ ಎಂದು ಬಿಂಬಿಸಲಾಗುತ್ತಿದೆ. ಇಂದಿಗೂ ಯಜಮಾನಿಕೆ ಸಂಸ್ಕೃತಿಯ ಪಳೆಯುಳಿಕೆಗಳು ಉಳಿದಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

  ಹಾಗಾಗಿ ಈಗ ನಾವು ರೂಢಿಗೆ ತರಬೇಕಿರುವುದು, ‘ಕಾಲು ಚಾಚುವಷ್ಟೂ ಹಾಸಿಗೆ ಹಾಕು' ಎನ್ನುವ ಹೊಸ ಗಾದೆಯನ್ನು.

Friday, October 3, 2014

# ಇಲ್ಲಿ ಎಲ್ಲವೂ ಮಾರಾಟಕ್ಕಿದೆ #

ಇಲ್ಲಿ ಎಲ್ಲವೂ ಮಾರಾಟಕ್ಕಿದೆ.

ಮೀನು, ಮಾಂಸ, ತರಕಾರಿಗಳ ಜೊತೆಗೆ
ಇಲ್ಲಿ ಎಲ್ಲವೂ  ಮಾರಾಟಕ್ಕಿದೆ
ಎಲ್ಲವೂ! ಪಂಚಭೂತಗಳೂ ಸೇರಿ

ನಾವು ವ್ಯಪಾರಿಗಳು
ನಮಗೆ ವ್ಯಾಪಾರ, ವ್ಯವಹಾರಗಳೆ ಧರ್ಮ
ಲಾಭವೊಂದೇ ನಿಜವಾದ ಮುಕ್ತಿ!

ಎಲ್ಲವನ್ನೂ ಮಾರುತ್ತೇವೆ
ನಾವು ಮಾರಾಟ ಮಾಡದ ಸರಕಿಲ್ಲ
ಸರಕಿಲ್ಲದೆ ವ್ಯಾಪಾರವಿಲ್ಲ, ಲಾಭ! ಮುಕ್ತಿ?

ವ್ಯಾಪಾರ ವ್ಯವಹಾರಕ್ಕೆ
ಅಂಗಡಿ ಮುಗ್ಗಟ್ಟುಗಳೇ ಬೇಕೆಂದೇನಿಲ್ಲ
ಸ್ಕೂಲು, ಆಸ್ಪತ್ರೆಗಳಲ್ಲಂತು ಲಾಭ, ನಿರಂತರ!

ಮೌಢ್ಯ-ವಿಜ್ಞಾನ, ಮಾಹಿತಿ-ಮನರಂಜನೆ
ಯಾವುದನ್ನೂ ಮಾರದೆ ಬಿಟ್ಟಿಲ್ಲ
ಹೆಣ್ಣು! ಎಲ್ಲ ವ್ಯಾಪಾರಕ್ಕೂ ಬೇಕು.

ಮಾದ್ಯಮ, ರಾಜಕೀಯವೂ
ನಮ್ಮ ಮಾರುಕಟ್ಟೆಗಳೆ
ಗಿರಾಕಿಗಳಿಗೆ ಬಲೆ ಬೀಸುವುದು ಇಲ್ಲಿಂದಲೆ

ಚುನಾವಣಾ ಮಾರುಕಟ್ಟೆಯಲ್ಲಿ
ಪ್ರಜಾಪ್ರಭುತ್ವವೇ ಸರಕು
ಹೂಡಿದರೆ ಬಂಡವಾಳ ಕೈಗೊಂಬೆ ಸರ್ಕಾರ

ಭಯೋತ್ಪಾದನೆ, ಯುದ್ಧಗಳಾದರೆ
ನಮಗೆ ಭರ್ಜರಿ ವ್ಯಾಪಾರ
ಶಾಂತಿಗಾಗಿ ಬಾಂಬು, ಬಂದೂಕು

ಹೊಲ-ಗದ್ದೆ, ಕಾರ್ಖಾನೆ-ಕಛೇರಿಗಳಲ್ಲಿ
ಕೆಲಸಗಾರರಿಗೆ ಸಿಕ್ಕರೆ ಸಂಪೂರ್ಣ ಫಲ
ನಮ್ಮ ಲಾಭಕ್ಕೇ ಸಂಚಕಾರ

ಅದಕ್ಕೆ, ನಾವೂ ಕೊಳ್ಳುತ್ತೇವೆ!
ಕಡಿಮೆಗೆ, ಅತೀ ಕಡಿಮೆಗೆ
ಕೆಲಸಗಾರರ ಕೆಲಸವನ್ನ

ಲಾಭವಿಲ್ಲದೆ ನಾವಿಲ್ಲ
ನಮ್ಮ ತಳಹದಿಯೇ ಲಾಭ
ಲಾಭವೊಂದೇ ನಮ್ಮ ನಿಯಮ.