Sunday, August 3, 2014

ದಲಿತರನ್ನು ಮತ್ತಷ್ಟು ದರಿದ್ರರನ್ನಾಗಿಸುವ ದಿನಗಳು ಬರಲಿವೆಯೇ?

ದಲಿತರನ್ನು ಮತ್ತಷ್ಟು ದರಿದ್ರರನ್ನಾಗಿಸುವ ದಿನಗಳು ಬರುತ್ತಿವೆಯೇ?

ಸಾವಿರಾರು ವರ್ಷಗಳಿಂದ ದಲಿತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ದುಡಿಮೆಯ ಅವಕಾಶ ಮತ್ತು ಸಂಪತ್ತಿನ ಪಾಲನ್ನು ನಿರಾಕರಿಸಿ ದಬ್ಬಾಳಿಕೆಯಿಂದ ಇಲ್ಲವಾಗಿಸಲಾಗಿತ್ತು. ದಲಿತರಿಂದ ಕಿತ್ತುಕೊಳ್ಳಲಾಗಿದ್ದರಲ್ಲಿ, ಪೂರ್ಣವಲ್ಲದಿದ್ದರೂ ಸ್ವಲ್ಪವಾದರೂ ಸಲ್ಲಿಸಲು ದಲಿತರಿಗೆ ಶಿಕ್ಷಣ & ಉದ್ಯೋಗದಲ್ಲಿನ ಕೆಲವೇ ಅವಕಾಶಗಳನ್ನು ಮೀಸಲಿರಿಸಿ ಕಾನೂನು ಮಾಡಲಾಯಿತು.

ಆರಂಭದಿಂದಲೂ ಈ ಕನಿಷ್ಠ ಮೀಸಲಾತಿಯನ್ನೂ ಸಹಿಸದ ಮೇಲ್ವರ್ಗದ ಮನಸ್ಸುಗಳು 'ಕಾರ್ಯದಕ್ಷತೆ'ಯ(ಅದು ಅವರಿಗೆ ಮಾತ್ರ ಇರುವುದು!) ಹೆಸರಿನಲ್ಲಿ ಅದನ್ನೂ ಇಲ್ಲವಾಗಿಸಲು ಪ್ರಯತ್ನಿಸುತ್ತಲೇ ಇದ್ದವು.

ನವ ಉದಾರೀಕೃತ ಆರ್ಥಿಕ ನೀತಿಗಳ ಜಾರಿಯಿಂದಾಗಿ ಖಾಸಗಿ ವಲಯ ವಿಸ್ತಾರಗೊಂಡು ಸಾರ್ವಜನಿಕ ವಲಯ ಕ್ಷೀಣಿಸುತ್ತಾ ಬಂದಿದೆ. ಹಾಗೆಯೇ ದಲಿತರಿಗೆ ಶಿಕ್ಷಣ & ಉದ್ಯೋಗದಲ್ಲಿನ ಅವಕಾಶಗಳೂ ಕಡಿಮೆಯಾಗಿವೆ.

ಖಾಸಗಿ ವಲಯದಲ್ಲಿನ ಶಿಕ್ಷಣ & ಉದ್ಯೋಗ ಪಡೆಯುವ 'ಅರ್ಹತೆ' & 'ಬುದ್ದಿವಂತಿಕೆ'(ಮೇಲ್ವರ್ಗದವರ ಪ್ರಕಾರ) ಇಲ್ಲದ ಇಲ್ಲದ ದಲಿತರು ಸರಿಯಾದ ಶಿಕ್ಷಣ, ಭೂಮಿ, ಉದ್ಯೋಗವಿಲ್ಲದೆ, ಅಸಂಘಟಿತ ವಲಯದಲ್ಲಿ ಕೂಲಿಗಳಾಗಿದ್ದಾರೆ. ಸಾಂದರ್ಭಿಕ, ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರೆಂಬ 'ನವ ಜೀತದಾಳು'ಗಳನ್ನಾಗಿ ಮಾಡಲಾಗಿದೆ.

ಪರಿಸ್ಥಿತಿ ಹೀಗಿರುವಾಗ, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಮಾಡುವ ಬದಲು, 'ಮೋದಿ ಸರ್ಕಾರ' ಅಸ್ತಿತ್ವಕ್ಕೆ ಬಂದಮೇಲೆ ದಲಿತರಿಗಿರುವ ಕನಿಷ್ಠ ಅವಕಾಶಗಳನ್ನು ಸಹ ಇಲ್ಲವಾಗಿಸಲು 'ಮೂರು ತಲೆಮಾರಿಗೆ ಮಾತ್ರ ಮೀಸಲಾತಿ' ಎಂದು ಬಿಜೆಪಿಯೊಳಗಿನ ದಲಿತರಿಂದಲೇ ಹೇಳಿಸಲಾಗುತ್ತಿದೆ.

ಹಾಗಾದರೆ, ಉಳ್ಳವರ ಖಾಸಗಿ ಸಂಪತ್ತು & ಆಸ್ತಿಯನ್ನೂ ಸಹ, ಮೂರು ತಲೆಮಾರಿಗೆ ಮಾತ್ರ ಮೀಸಲಿರಿಸಿ, ನಂತರ ಸಾರ್ವಜನಿಕಗೊಳಿಸಿದರೆ ಇಲ್ಲದವರಿಗೆ ಸ್ವಲ್ಪವಾದರೂ ನ್ಯಾಯ ಸಿಕ್ಕೀತು.

Thursday, July 31, 2014

ಸಮಾಜದ ಅವನತಿ

ಯಾವುದೇ ಸಮಾಜದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು, ದಲಿತರು, ಬಡವರು ಮತ್ತು ಅಮಾಯಕರ ಮೇಲೆ ದಾಳಿ, ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ ಹೆಚ್ಚಾದಷ್ಟೂ ಆ ಸಮಾಜದ ತಾಳಿಕೆ ಮನೋಭಾವ ಕಡಿಮೆಯಾಗಿದೆ ಎಂದರ್ಥ. ಅಂತಹ ತಾಳಿಕೆ ಇಲ್ಲದ ಸಮಾಜ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ.

ನಮ್ಮ ಹೋರಾಟ ಮುಂದುವರಿಯಲಿದೆ!

ಹಾಸನ ನಗರ ಸಭೆಯಲ್ಲಿ ಪೌರ ಕಾರ್ಮಿಕರ ಮುಷ್ಕರದಿಂದಾಗಿ, ಅವರಿಗೆ ಬಾಕಿ ವೇತನ ಹಾಗೂ ಕನಿಷ್ಟ ಮಾನವೀಯ ಸೌಲಭ್ಯಗಳನ್ನು ನೀಡುವ ವಿಚಾರಕ್ಕೆ ನಡೆದ ಸಭೆಯಲ್ಲಿ ಆರಂಭವಾದ ಗದ್ದಲ, ಮುಂದುವರಿಯುತ್ತಿದೆ.

ಆಡಳಿತ ಪಕ್ಷವಾದ ಜೆಡಿ(ಎಸ್)ನ ನಗರ ಸಭಾ ಸದಸ್ಯರು ಹಾಗೂ ಆಯುಕ್ತರ ನಡುವೆ ಅವರವರ ಲಾಭ-ನಷ್ಟಗಳಿಗಾಗಿ, ಜಗಳ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ, ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ಹಾಸನ ನಗರ ಗಬ್ಬೆದ್ದು ಹೋಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ವಹಣೆಯ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಅಕ್ರಮ ಭ್ರಷ್ಟ ಕೂಟ ಚನ್ನಾಗಿ ಲಾಭ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷಗಳು ನಗರ ಸಭೆಯ 'ಸೂಪರ್ ಸೀಡ್'ಗೆ ಆಗ್ರಹಿಸುತ್ತಿವೆ. ನಗರ ಸಭೆ ಅಯುಕ್ತರು ತಮ್ಮ ರಕ್ಷಣೆಗಾಗಿ 'ಜಾತಿ ಗುರಾಣಿ'ಯನ್ನು ಹಿಡಿದು ನಿಂತಿದ್ದಾರೆ. ಯಾರಿಗೂ ಕಾರ್ಮಿಕರ ಕೂಲಿ ಮತ್ತು ಕನಿಷ್ಟ ಮಾನವೀಯ ಬದುಕಿನ ಬದುಕಿನ ಬಗ್ಗೆ ಕಾಳಜಿ ಇಲ್ಲ.

ಈ ಪರಿಸ್ಥಿತಿಯ ಲಾಭವನ್ನು 'ಯಾರೋ?' ಪಡೆದುಕೊಳ್ಳುತ್ತಾರೆ. ಆದರೆ, ನಿಜವಾಗಿಯೂ ಕಳೆದುಕೊಳ್ಳುವವರು, 'ನಗರದ ನಾಗರೀಕರು, ಹಾಸನ ನಗರ ಸಭೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಧ್ಯಕ್ಷರಾಗಿರುವ ಓರ್ವ 'ದಲಿತ ಮಹಿಳೆ', ಮತ್ತು ದಲಿತರಲ್ಲೇ ದಲಿತರಾಗಿರುವ 'ಪೌರ ಕಾರ್ಮಿಕರು'. ಇವರ ಚಿಂತೆ ಯಾರಿಗೂ ಇದ್ದಂತಿಲ್ಲ, ಮತ್ತು ಇವರ ಪರವಾಗಿ ಯಾರೂ ಬೀದಿಗಿಳಿಯುವುದಿಲ್ಲ. ಹೀಗಿದೆ ನೋಡಿ! ನಮ್ಮ (ಅ)ನಾಗರಿಕ ಸಮಾಜ.

ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರು, ಖಂಡಿತವಾಗಿಯೂ 'ನಾಗರಿಕ ಸಮಾಜದ'ದ ಸ್ವಾಸ್ಥ್ಯವನ್ನೂ ಕಾಪಾಡಲಿದ್ದಾರೆ.

ನಮ್ಮ ಹೋರಾಟ ಮುಂದುವರಿಯುತ್ತದೆ......