Thursday, July 31, 2014

ನಮ್ಮ ಹೋರಾಟ ಮುಂದುವರಿಯಲಿದೆ!

ಹಾಸನ ನಗರ ಸಭೆಯಲ್ಲಿ ಪೌರ ಕಾರ್ಮಿಕರ ಮುಷ್ಕರದಿಂದಾಗಿ, ಅವರಿಗೆ ಬಾಕಿ ವೇತನ ಹಾಗೂ ಕನಿಷ್ಟ ಮಾನವೀಯ ಸೌಲಭ್ಯಗಳನ್ನು ನೀಡುವ ವಿಚಾರಕ್ಕೆ ನಡೆದ ಸಭೆಯಲ್ಲಿ ಆರಂಭವಾದ ಗದ್ದಲ, ಮುಂದುವರಿಯುತ್ತಿದೆ.

ಆಡಳಿತ ಪಕ್ಷವಾದ ಜೆಡಿ(ಎಸ್)ನ ನಗರ ಸಭಾ ಸದಸ್ಯರು ಹಾಗೂ ಆಯುಕ್ತರ ನಡುವೆ ಅವರವರ ಲಾಭ-ನಷ್ಟಗಳಿಗಾಗಿ, ಜಗಳ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ, ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ಹಾಸನ ನಗರ ಗಬ್ಬೆದ್ದು ಹೋಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ವಹಣೆಯ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಅಕ್ರಮ ಭ್ರಷ್ಟ ಕೂಟ ಚನ್ನಾಗಿ ಲಾಭ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷಗಳು ನಗರ ಸಭೆಯ 'ಸೂಪರ್ ಸೀಡ್'ಗೆ ಆಗ್ರಹಿಸುತ್ತಿವೆ. ನಗರ ಸಭೆ ಅಯುಕ್ತರು ತಮ್ಮ ರಕ್ಷಣೆಗಾಗಿ 'ಜಾತಿ ಗುರಾಣಿ'ಯನ್ನು ಹಿಡಿದು ನಿಂತಿದ್ದಾರೆ. ಯಾರಿಗೂ ಕಾರ್ಮಿಕರ ಕೂಲಿ ಮತ್ತು ಕನಿಷ್ಟ ಮಾನವೀಯ ಬದುಕಿನ ಬದುಕಿನ ಬಗ್ಗೆ ಕಾಳಜಿ ಇಲ್ಲ.

ಈ ಪರಿಸ್ಥಿತಿಯ ಲಾಭವನ್ನು 'ಯಾರೋ?' ಪಡೆದುಕೊಳ್ಳುತ್ತಾರೆ. ಆದರೆ, ನಿಜವಾಗಿಯೂ ಕಳೆದುಕೊಳ್ಳುವವರು, 'ನಗರದ ನಾಗರೀಕರು, ಹಾಸನ ನಗರ ಸಭೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಧ್ಯಕ್ಷರಾಗಿರುವ ಓರ್ವ 'ದಲಿತ ಮಹಿಳೆ', ಮತ್ತು ದಲಿತರಲ್ಲೇ ದಲಿತರಾಗಿರುವ 'ಪೌರ ಕಾರ್ಮಿಕರು'. ಇವರ ಚಿಂತೆ ಯಾರಿಗೂ ಇದ್ದಂತಿಲ್ಲ, ಮತ್ತು ಇವರ ಪರವಾಗಿ ಯಾರೂ ಬೀದಿಗಿಳಿಯುವುದಿಲ್ಲ. ಹೀಗಿದೆ ನೋಡಿ! ನಮ್ಮ (ಅ)ನಾಗರಿಕ ಸಮಾಜ.

ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರು, ಖಂಡಿತವಾಗಿಯೂ 'ನಾಗರಿಕ ಸಮಾಜದ'ದ ಸ್ವಾಸ್ಥ್ಯವನ್ನೂ ಕಾಪಾಡಲಿದ್ದಾರೆ.

ನಮ್ಮ ಹೋರಾಟ ಮುಂದುವರಿಯುತ್ತದೆ......